ಬೈರಾಮ್ ಖಾನ್
	ಮುಗಲ್ ಚಕ್ರವರ್ತಿ ಹುಮಾಯೂನನ ಒಡನಾಡಿ ಮತ್ತು ಆತನ ಅಪ್ರಾಪ್ತವಯಸ್ಕ ಪುತ್ರ ಅಕ್ಬರನ ಪೋಷಕ. ಹುಮಾಯೂನ್ ಕಾಲವಾದಾಗ (1856) ದೆಹಲಿಯ ಸಿಂಹಾಸನಕ್ಕೆ ಅಕ್ಬರನನ್ನು ಉತ್ತರಾಧಿಕಾರಿಯಾಗಿ ಘೋಷಿಸಲು ಬೈರಾಮ್ ಖಾನ್ ಯುಕ್ತ ಕ್ರಮ ಕೈಗೊಂಡ. ಆದರೆ ಸ್ವಲ್ಪ ಸಮಯದಲ್ಲಿಯೇ ದೆಹಲಿ ಅಕ್ಬರನ ಕೈಬಿಟ್ಟುಹೋಯಿತು. ಬೈರಾಮ್ ಖಾನನ ಶಕ್ತಿ ಹಾಗೂ ಸೇನಾಧಿಪತ್ಯಗಳಿಂದಾಗಿ ಎರಡನೆಯ ಪಾಣೀಪಟ್ ಕದನದಲ್ಲಿ ಅಕ್ಬರ್ ಗೆಲ್ಲುವುದು ಹಾಗೂ ದೆಹಲಿಯ ಸಿಂಹಾಸನ ಮರಳಿಪಡೆಯುವುದು ಸಾಧ್ಯವಾಯಿತು. (ನೋಡಿ- ಪಾಣಿಪಟ್-ಕದನಗಳು) ಮುಂದಿನ ನಾಲ್ಕು ವರ್ಷಗಳ ಕಾಲ ಬೈರಾಮ್‍ಖಾನ್ ಅಪ್ರಾಪ್ತವಯಸ್ಕ ಅಕ್ಬರನ ರಾಜಪ್ರತಿನಿಧಿಯಾಗಿದ್ದ. ಈ ಅವಧಿಯಲ್ಲಿ ಮುಗಲ್ ಸೇನೆ ಇವನ ಮಾರ್ಗದರ್ಶದಲ್ಲಿ ಗ್ವಾಲಿಯರ್, ಅಜ್ಮೀರ್, ಜಾನ್‍ಪುರಗಳನ್ನು ವಶಪಡಿಸಿಕೊಡಿತು. ಮಾಳ್ವದ ಮೇಲೆ ಆಕ್ರಮಣ ನಡೆಸಲೂ ಕ್ರಮ ಕೈಗೊಳ್ಳುತ್ತಿದ್ದ. ಬೈರಾಮ್‍ಖಾನ್ ಕಟ್ಟುನಿಟ್ಟಾಗಿ ತನ್ನ ಅಧಿಕಾರ ಚಲಾಯಿಸುತ್ತಿದ್ದ. ಇದರಿಂದ ಉನ್ನತ ಸ್ಥಾನಗಳಲ್ಲಿದ್ದ ಅನೇಕ ಮುಗಲರಿಗಷ್ಟೇ ಅಲ್ಲದೆ ಅಕ್ಬರನಿಗೂ ಕಿರಿಕಿರಿಯಂಟಾಯಿತು. ಯುವ ಸಾಮ್ರಾಟ 18ನೆಯ ವಯಸ್ಸಿನಲ್ಲಿ ಆಡಳಿತ ಸೂತ್ರವನ್ನು ತಾನೇ ವಹಿಸಿಕೊಳ್ಳಲು ನಿರ್ಧರಿಸಿದ. ಹೀಗಾಗಿ ರಾಜಪ್ರತಿನಿಧಿ ಹಾಗೂ ರಕ್ಷಕ ಸ್ಥಾನದಿಂದ ಬೈರಾಮ್ ಖಾನನನ್ನು 1560ರಲ್ಲಿ ವಜ ಮಾಡಿದ. ಬೈರಾಮ್‍ಖಾನ್ ಮೊದಲಿಗೆ ಸಮಾಧಾನದಿಂದಲೇ ಇದಕ್ಕೊಪ್ಪಿದ, ಮೆಕ್ಕಕ್ಕೆ ಹೊರಟ, ಆದರೆ ತತ್‍ಕ್ಷಣವೇ ಬಂಡಾಯವೆದ್ದ. ಅಂತಿಮವಾಗಿ ಪರಾಭವಗೊಂಡ.

	1560 ಅಕ್ಟೋಬರಿನಲ್ಲಿ ಬೈರಾಮ್‍ಖಾನನನ್ನು ಹೊಷಿಯಾರಪುರ ಜಿಲ್ಲೆಯ ಹಾಜಿಪುರದಲ್ಲಿ ಅಕ್ಬರನ ಮುಂದೆ ಹಾಜರುಪಡಿಸಲಾಯಿತು. ಅಕ್ಬರ್ ಇವನ ಬಗ್ಗೆ ಉದಾರವಾಗಿಯೇ ವರ್ತಿಸಿದ. ತನ್ನ ಆಪ್ತಸಹಾಯಕನಾಗಿರುವುದು, ಕಾಲ್ಪೀ ಮತ್ತು ಚಾಂದೇರಿಗಳ ಜಹಗೀರುದಾರನಾಗಿರುವುದು, ಪ್ರವಾಸ-ಇವುಗಳ ಪೈಕಿ ಯಾವುದು ಬೇಕೋ ಅದನ್ನು ಆರಿಸಿಕೊಳ್ಳುವಂತೆ ತಿಳಿಸಿದ. ತಾನು ಆಡಳಿತ ನಡೆಸಿದ ಪ್ರದೇಶದಲ್ಲಿಯೇ ಸೇವೆಸಲ್ಲಿಸಲು ನಿರಾಕರಿಸಿದ ಬೈರಾಮ್‍ಖಾನ್ ಗುಜರಾತಿನತ್ತ ಪ್ರವಾಸಹೊರಟ. ಮುಬಾರಕ್ ಖಾನ್ ಎಂಬುವನ ನೇತೃತ್ವದಲ್ಲಿ ಕೆಲವು ಆಫ್‍ಘನ್ನರು ಪಠಾನ್‍ನಲ್ಲಿ ಇವನನ್ನು ಕೊಂದರು (31 ಜನವರಿ 1561).

	ಬೈರಾಮ್‍ಖಾನ್ ನಿಷ್ಠುರನಾಗಿ ವರ್ತಿಸುತ್ತಿದ್ದ; ಉದ್ಧತನಾಗಿದ್ದ; ನಿರಂಕುಶವಾಗಿದ್ದು ದಬ್ಬಾಳಿಕೆಯ ವಿಧಾನ ಅನುಸರಿಸುತ್ತಿದ್ದ ಮತ್ತು ಮಹತ್ತ್ವಾಕಾಂಕ್ಷಿಯಾಗಿದ್ದು ಅಧಿಕಾರಪ್ರಿಯನಾಗಿದ್ದ. ಇವನ ಆಡಳಿತ ದಕ್ಷತೆಯಿಂದ ಕೂಡಿತ್ತಾದರೂ ಸ್ವೇಚ್ಛಾಪ್ರವೃತ್ತಿಯದ್ದೂ ಸ್ವಜನಪಕ್ಷಪಾತದ್ದೂ ಆಗಿತ್ತು. ಹಿಂದೂಸ್ಥಾನದ ಬಹುಪಾಲು ಸುನ್ನಿ ಮುಸಲ್ಮಾನರು ಷಿಯಾಮುಸಲ್ಮಾನನಾಗಿದ್ದ ಬೈರಾಮ್ ಖಾನನನ್ನು ದ್ವೇಷಿಸುತ್ತಿದ್ದರು. ತನ್ನ ಸ್ವಸಾಮಥ್ರ್ಯದಿಂದ ಉನ್ನತಸ್ಥಾನ ಪಡೆದಿದ್ದರೂ ಕೆಲವು ಕುಲೀನರ ವೈಷಮ್ಯಕ್ಕೆ ಗುರಿಯಾಗಿದ್ದ.

	ಭಾರತದಲ್ಲಿ ಮುಗಲರ ಪುನಸ್ಸ್ಥಾಪನೆಗೆ ವಾಸ್ತವವಾಗಿ ಇವನೇ ಕಾರಣಕರ್ತ. ಇವನ ನೇರವು ಮಾರ್ಗದರ್ಶನಗಳಲ್ಲದಿದ್ದರೆ ಅಕ್ಬರನಿಗೆ ತನ್ನ ಸಿಂಹಾಸನ ಉಳಿಸಿಕೊಳ್ಳುವುದೇ ಕಷ್ಟವಾಗುತ್ತಿತ್ತು. ಇವನ ನಿರ್ಗಮನದೊಡನೆ ಮುಗಲ್ ಇತಿಹಾಸದಲ್ಲಿ ಬಾಬರ್ ಯುಗ ಕೊನೆಗೊಂಡಿತು. ಮುಂದೆ ಬೈರಾಮ್‍ಖಾನನ ಅಪ್ರಾಪ್ತವಯಸ್ಕ ಪುತ್ರ ಮಿರ್ಜಾ ಅಬ್ದುಲ್ ರಹೀಮ್ ರಾಜಾಶ್ರಯದಲ್ಲಿ ಬೆಳದು ಅಕ್ಬರನ ಆಸ್ಥಾನದಲ್ಲಿ ಖಾನ್ ಖಾನನ ಸ್ಥಾನಕ್ಕೇರಿದ (1584).					(ಎನ್.ಎಸ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ